ಕನ್ನಡ ಕವನಗಳು

# ಕೂತು ಕೂತಲ್ಲೇ …

ದೇವತೆಯಾಗಿಬಿಟ್ಟೆ .
ಹೋಗಿ ಬರುವವರೆಲ್ಲ ಕೈ ಮುಗಿ ಮುಗಿದು
ಹೊನ್ನ ಶೂಲಕೇರಿಸಿ ಕಾಲು ಕಿತ್ತರು.

ವರವ ಕೊಟ್ಟರೆ ಹತ್ತಿರ ನಿಲ್ಲುವರಿಲ್ಲ .
ಚಾಚಿದ ಜೋಳಿಗೆ ಗಪ್ಪನೆ ಮುಚ್ಚಿ
ಮುನ್ನಡೆವರು ಭಿಕ್ಷೆ ಬಾಚಿ.
ನನ್ನ ಒಲವ ಬರಿದು ಮಾಡಿ.

ಶಾಪ ಕೊಟ್ಟರೆ ನಿಂತು ನಿಂದಿಸುವರಿಲ್ಲ.
ಹಣೆಯಲ್ಲಿ ಬರೆದದ್ದು
ತುಟಿಯಂಚಿನ ಸೊಟ್ಟ ನಗುವಿನಲ್ಲಿ
ಮಿನುಗಿ ಅಲ್ಲಿಯೇ ಶಾಂತ.

ದೇವತೆಯಂದರೆ ಅವಳಲ್ಲೇ
ಹಾಗೊಮ್ಮೆ ಭುವಿಗಿಳಿದು ಭುಜದಡವಿ
ಸವೆಸಿದ ಅಡ್ಡ ದಾರಿಗಳಿಗೆ ಕನ್ನಡಿ ಹಿಡಿದರೆ
ಅವಲೋಕನ ಮಾಡಿಕೊಳ್ಳುವರಿಲ್ಲ.

ಕಾಲ ಬಳಿ ಹೂ ಬಿಡದ ಬಳ್ಳಿಗಳಾಗಿ
ಭಕ್ತರೆಲ್ಲ ಕೊಳೆಯುತಿಹರು.
ಅವರ ಮುಕ್ತಿ ನನ್ನ ಉಸಿರಲಿ
ನನ್ನ ಮುಕ್ತಿ ಅವರ ಹೆಸರಲಿ.

ದಯಾ ಭಟ್ –

# ಅವಶೇಷಗಳ ನಡುವೆ

ಯಾರಿದ್ದರೀ ಛಾಯೆಗಳ ನಗರಿಯಲಿ?

ಈ ಆಸನಗಳ ಅಲಂಕರಿಸಿದವರ್ಯಾರೋ ?

ಈ ಘನ ಗಂಭೀರ ಕಮಾನುಗಳು ಎಂದಾದರೂ ನಲಿವು ಕಂಡಿದ್ದವೇ ?

ಬಿರುಗಾಳಿ ಈ ಕಿಟಕಿ ಬಾಗಿಲುಗಳ ಕಣ್ಣುಗಳಲಿ ಧೂಳೆರಚುತಿವೆ,

ಇವು ನೋಡುತಿವೆ ಸುಮ್ಮನೆ

ಎವೆಯಿಕ್ಕದೆ .

ಅವೀಗ ಬರೀ ಕಾಲನು ತಿಂದು ಉಳಿಸಿ ಹೋದ ಅಸ್ಥಿಪಂಜರಗಳು.

ಈ ಭಾವಿಗಳು ನತದೃಷ್ಟರ ಗಲ್ಲುಗಂಬಗಳಾಗಿದ್ದವೇನೋ.

ಜೇಡರ ಬಲೆಗಳು ಅವುಗಳ ಬಾಯಿ ಮುಚ್ಚಿವೆ .

ಮುಗಿದು ಹೋದ ಕಥೆಗಳು ಲತೆಗಳಾಗಿ ಭಾವಿಗಳ ಕಂಠ ಬಿಗಿದಿವೆ .

ಈ ಊರಿನ ಗೋಡೆಗಳ ಮಸಿಯಲ್ಲಿ ಕೊನೆಯ ವಲಸಿಗನ ಮಯ್ಯ ಗಂಧವಿದೆ .

ಈ ಸಮಾಧಿಗಳ ಮೇಲೆ ಹೊಬಳ್ಳಿ ಕೆತ್ತಿ ಹಿಂದಿರುಗಿ ನೋಡದೆ ನಡೆದಿರಬಹುದು ಮತ್ತಿನೊಂದು ಪಟ್ಟಣಕೆ .

ಅಡಿಗೆ ಮಲಗಿರುವ ಶಾಂತತೆಯ ಮೇಲೆ ಚಂದ್ರ ತನ್ನ ಬಿಳುಪು ವ್ಯಯಿಸುತ್ತಾ ಕಳೆದು ಹೋಗುತ್ತಿದ್ದಾನೆ .

ಚಂದ್ರನ ಬೆಳಕಿಗೆ ಚಿಹ್ನೆಗಳು ಹೊಳೆದು ಮಾಯವಾಗುತ್ತಿವೆ.

ಈ ಚಿಹ್ನೆಗಳ ಅರ್ಥ ತಿಳಿಯಲು ನನ್ನ ಮನಸು ಹವಣಿಸುತ್ತಿದೆ . ಚಂದ್ರ ನೀನು ಹೇಳಲಾರೆಯಾ ?

ಯಾಕೆ ಈ ಅವಶೇಷಗಳು ನನಗೆ ಪ್ರಿಯವಾಗುತ್ತಿವೆ !

ಯಾಕೆ ನನ್ನ ಕಾಲುಗಳು ಈ ಕವಲುಗಳಲ್ಲಿ ಸುಳಿದಾಡುತ್ತಿವೆ ?

ನನ್ನ ಅಲೆಮಾರಿತನ ಗತವನ್ನು ಕೆಣಕುತ್ತಿರುವುದೇಕೆ ಈ ದಿನ ?

ಗತವ ಸುತ್ತುತ್ತ ಸುತ್ತುತ್ತ ಅಪರಾಧಿಯಾಗುತ್ತೇನೆ .

ಬಿಟ್ಟು ಹೋದ ಹೆಜ್ಜೆ ಗುರುತುಗಳ ಕದಿಯುತ್ತ ಕಳ್ಳನಾಗುತ್ತೇನೆ .

ನಿಟ್ಟುಸಿರಿನಿಂದ ಭಾರವಾಗಿ ಬಾಗುತ್ತಿರುವ ಬೋಧಿಯ ರೆಂಬೆಗಳಿಗೆ ನನ್ನ ನಿಟ್ಟುಸಿರುಗಳನ್ನು ಸೇರಿಸುತ್ತಾ ಮತ್ತಷ್ಟು ಸಣ್ಣವನಾಗುತ್ತೇನೆ .

ಆದರೆ ಅರೆರೇ ಇದೇನು ಬೋಧಿಯ ಪಾದದಲಿ ! ಶರದೃತುವಿನ ಛಾಯೆಯಲ್ಲವೇ ಈ ಕುಂದಿಹೋದ ಎಲೆಗಳ ಹಾಸು ?

ಒಮ್ಮೆಲೇ ಇದೇನಿದು ಅರ್ಥವಾಗದ ಆವೇಗ. ಈ ರೆಂಬೆಗಳು ಚಿರಪರಿಚಿತವೆನಿಸುತ್ತಿವೆ .

ನಾನು ಆ ರೆಂಬೆಯ ಮೇಲೆ ಕುಳಿತು ಕೊಳಲನೂದಿದ ಗೋಪಾಲಕನಾಗುತ್ತೇನೆ

ಮುಸ್ಸಂಜೆ ಕೆಂಪಲ್ಲಿ ಆ ಬಾಲಕನ ಹುಡುಕಿ ಬಂದ ಅವನ ತಾಯಿಯಾಗುತ್ತೇನೆ

ಅವಳ ಕಾಲ್ಗೆಜ್ಜೆಗಳ ಮಿಂಚಾಗುತ್ತೇನೆ

ಅವಳು ಒಲೆಯ ಮೇಲೆ ಬೇಯಲು ಬಿಟ್ಟ ಮಡಿಕೆಯ ಕಾಳಾಗುತ್ತೇನೆ

ಗಂಡಸರ ಹರಟೆಯಾಗುತ್ತೇನೆ, ಅವರ ಗುಡುಗುಡಿಯ ಹೊಗೆಯಾಗುತ್ತೇನೆ

ಕಪಡ್ವಂಜ ಗಾಜಿನಲ್ಲಿ ಮಿರುಗುತ್ತಿರುವ ಮದಿರೆಯಾಗುತ್ತೇನೆ.

ರಾಜನಂತೆ ಮೆರೆದು ಅನಾಥನಂತೆ ನಶಿಸಿ ಹೋದ ಸಾಮ್ರಾಜ್ಯದ ಕಂಪಾಗುತ್ತೇನೆ, ಇಂಪಾಗುತ್ತೇನೆ .

ನಾನು ನಾನಲ್ಲ. ಅಳಿದು ಹೋದ ನಗರ.

ದಾರಿ ತಪ್ಪಿ ಬಂದ ಪಥಿಕನ ಆತ್ಮ ಬೆಳಗುವ ಬೋಧಿಯಾಗುತ್ತೇನೆ . ಅವಳ ಕವಲಿನಲ್ಲಿ ಚಿರವಾಗಿ ನೆಲೆಸುತ್ತೇನೆ .

-ದಯಾ ಭಟ್-

(Indiaree.comನಲ್ಲಿ ಪ್ರಕಟವಾದ ಕವನ)

# ಶಾಪಗ್ರಸ್ತೆ

ಯುಗ-ಯುಗಗಳು ಕಳೆದು ಹೋದವು

ಅವಳು ಮುಗಿಯದ ಕವನದಂತೆ

ಅರಿಷಿಣ ಬಾನಲ್ಲಿ ಚುಕ್ಕೆಯಾಗಿ.

ಅವಳ ಶೇಷ, ಹಿತ್ತಲ ಮರದ ಪಾದಕ್ಕೆ ಶರದೃತುವಿನ ಎಲೆಯ ಹಾಸಿಗೆ .

ಅವಳಿಲ್ಲಿಯೂ ಸಲ್ಲಲಾರಳು , ಅಲ್ಲಿಯೂ ಬೆರೆಯಲಾರಳು.

ಅವಳು ತಾರೆಯೂ ಅಲ್ಲ, ಅವಳು ಭೂಮಿಯೂ ಅಲ್ಲ .

ಬಾನು ಅವಳ ಮುಖಕ್ಕೆ ಬಣ್ಣ ತೀಡಿದರೆ

ತಾರೆಗಳು ಅವಳ ಜಡೆಗೆ ಹೆಣೆದುಕೊಂಡಿವೆ .

ಶಾಪಗ್ರಸ್ತೆಯಾಗಿ ಅವಳು ಕಾಯುವಳು ಕೈಗೆ ಸಿಗದ ಪರಿಪೂರ್ಣತೆಗೆ.

ಒಂದು ಪಾದ ಅಶ್ವತ್ಥದ ಮೇಲೆ , ಮತ್ತಿನೊಂದಕ್ಕೆ ನೆಲೆಯಿಲ್ಲ.

ಅವಳ ನಿಟ್ಟುಸಿರು ಪರ್ವತ ನೆನೆಸುತ್ತಿವೆ

ಅವಳ ಕಣ್ಣೀರು ನದಿಗಳ ತುಂಬುತ್ತಿವೆ .

ಅವಳು ಅದೆಷ್ಟು ಮುಖಗಳನ್ನು ಹೊತ್ತಳೋ

ಬಾನು ಅದೆಷ್ಟು ಸಲ ಬಣ್ಣ ಬದಲಾಯಿಸಿತೋ

ಕಂಡರೂ ಕಾಣದಂತೆ ಈ ಮರುಳು ಜಾತ್ರೆಯಲಿ ಎಲ್ಲ ಮಂಗಮಾಯ ಕಾಣಿರೋ .

-ದಯಾ ಭಟ್-

(Indiaree.comನಲ್ಲಿ ಪ್ರಕಟವಾದ ಕವನ)

# ಮಾತು ಬಾರದ ಮರ

ಏನು ಬರೆದರೇನು ಈ ಮರದಡಿಗೆ ಕುಳಿತು

ನಾಳೆಗಿದನು ಓದುವರು ಯಾರೋ 

ಎಂದು ಕವಿಯು ಗೊಂದಲಕೆ ಬೀಳಲು

ಮರವು ನುಡಿಯಿತೊಂದು ಮುತ್ತಿನಂಥ ಮಾತು

ಮುಗಿಲಿನತ್ತ ನೋಟವಿಟ್ಟು

ವಸುಧೆಯ ಒಡಲೊಳು ಪಾದ ನೆಟ್ಟು

ಒಮ್ಮೆ ಕೊನರುತ್ತಾ

ಇನ್ನೊಮ್ಮೆ ಕೊರಡಾಗುತ್ತಾ

ಎಣಿಸುತ್ತಿಲ್ಲವೇ ನಾನು ಸರಿದು ಹೋದ ವಸಂತಗಳನ್ನು ?

ಕೊನೆಯ ಹಸಿರು , ಕೊನೆಯ ಉಸಿರು

ಮೆಟ್ಟಿಲಾಚೆ ಕುಳಿತು ನಗಲು

ನಾನೂ ನಗುವೆ ಜೊತೆಯಲೇ .

ಯಾವ ಹಾಡಾದರೇನು

ಯಾವ ರಾಗವಾದರೇನು

ರೆಕ್ಕೆಯ ಮೇಲೆ ಕಾಲನು ಏರಿ ಕುಳಿತ ಮಾತ್ರಕೆ

ಹಾಡದಿರುವುದೇ ಕೋಗಿಲೆ?

ಕೆಂಡಸಂಪಿಗೆ ಬಾನ ಕಂಡು

ರವಿಯು ಮುಳುಗಿಹೋದನೆಂದು ನೊಂದು

ಗೂಡ ಸೇರದಿರುವುದೇ ಬೆಳ್ಳಕ್ಕಿ?

ಮುಚ್ಚಿದ ಕಂಗಳ ಅಂಗಳಲ್ಲಿ

ರಂಗು ರಂಗಿನ ನಾಳೆಗಳೆಲ್ಲ

ಗರಿ ಬಿಚ್ಚಿದ ನವಿಲುಗಳಾಗಿ

ನರ್ತನಗೈವುದಿಲ್ಲವೇ ?

ಪ್ರಶ್ನೆಗಳಿಲ್ಲದ ನಾಲಿಗೆಯ ತುದಿ

ಅದೆಷ್ಟು ಹಗುರವೆಂಬ ಅಚ್ಚರಿ.

ಒಂಟಿ ಮರದ ಜಾಣ್ಮೆ ಹೆಗಲಿಗೇರಿಸಿ 

ಕವಿಯು ಹೊರಟ ತೇರನೇರಿ.

# ಏನು ಕತೆಯೋ

ಅಂಗಳ ತುಂಬಾ ಅರಳು ಮಲ್ಲಿಗೆಯ ಘಮಲು

ತೊಟ್ಟಿಲ ಕಂದಮ್ಮನ ಕಾಲ್ಗೆಜ್ಜೆಯಲಿ ಅಚ್ಚರಿಯ ಸೆಳಕು.

ಹಗಲು ರಾತ್ರಿಗಳು ಒಂದರ ಅಂಚಿನಲ್ಲಿ ಮತ್ತೊಂದು ಹೆಣೆದುಕೊಂಡು 

ಒಂದರಂತೆ ಇನ್ನೊಂದು…  ಮತ್ತೊಂದು … ಕಾಲ ಬಳಿ ಋತುಗಳ ರಾಶಿ.

ಬಿಸಿಲಿಗೆ ಮೈಯೊಡ್ಡಿದ ಬಿದಿರಿನ ಚಾಪೆ ಹೊರಗೆ ಸುಟ್ಟು  ಬೂದಿಯಾಗುತ್ತ

ಒಳಗೆ ಕಾಮಾಲೆ ಕಣ್ಣೊರೆಸುತ್ತ…  ನಿಂತ ನೀರು ನಿಂತಲ್ಲಿಯೇ .

ಕೈಗಳು  ತೂಗುತಿವೆ ಬರಿದಾದ ತೊಟ್ಟಿಲ್ಲನು. ಕಂದಮ್ಮ ಹೊರಜಾರಿ ಯುಗಗಳೇ ಆದವು.

ಮನಸು ಮರ್ಕಟ … ಅಂತರಂಗ- ಸಂತೆ ಪೇಟೆಯ ಗೋಜಲು.

ಮನದಾಚೆ ಹೆಜ್ಜೆಗಳು ಮುಂದೆ ಮುಂದೆ. ಇಲ್ಲಿ ಏನೋ ಹಿಂಜರಿತ.

ಹೊಸ್ತಿಲಾಚೆ ಎಲ್ಲವೂ ಶಾಂತ ಸರೋವರ . ಇಲ್ಲಿ ಕಡಲ ಮೊರೆತ .

ಅರ್ಧ ಬೆಳಗುವ ಚಂದ್ರ … ಅರ್ಧ ಮಿಣುಕುವ ತಾರೆ

ಅರ್ಥವಾಗದ ಅಪೂರ್ಣತೆ.ಅರ್ಥವಿಲ್ಲದ ಹೋರಾಟ .

# ಅವಳ ಹಾಡು 

ಭುಜಕ್ಕೆ ಕಿಟಕಿಯ ಆಸರೆ. ಮನದ ತುಮುಲಕ್ಕೆ ಪದಗಳ ಆಸರೆ

ಎಂದೋ ಪ್ರಾರಂಭವಾದ ಹಾಡಿಗೆ ಪಲ್ಲವಿಯ ಆಸರೆ 

ಎಂದೋ ಮುಗಿಯುವ ಹಾಡಿಗೆ ಕಾಲನ ಆಸರೆ

ಕ್ಷಣಿಕ ಸ್ವಾತಂತ್ರ್ಯಕ್ಕೆ ಸ್ವರಗಳ ಆಸರೆ.

ಸೂರೆ ಹೋದ ಪಟ್ಟಣದ ದಂತಕಥೆಯಂತೆ

ಹಿಡಿಯಷ್ಟು ಜೀವ… ಮುಡಿದಷ್ಟು ನಲಿವು

ಮೃದಂಗದ ತಕಧಿಮಿಯಲ್ಲಿ ನಿನ್ನ ಉಸಿರಿನ ನೆರಳು

ಕಂಡೂ ಕಾಣದಂತೆ ತಾಳ ತಪ್ಪುವ ಬೆರಳುಗಳು .

ಯಾಕೆ ಬರಲಿಲ್ಲ ಮತ್ತೆ ಆ ದಿನ ಎಂಬ ಆಕ್ಷೇಪ

ಥಟ್ಟನೆ ಎದ್ದ ಸಣ್ಣ ಅಪಸ್ವರಕೆ ನವಿರಾದ ಎಚ್ಚರಿಕೆ

ಧ್ವನಿಯ ಕಂಪನ ಇಂದಿಗೂ ಗುಪ್ತಗಾಮಿನಿ

ಅಲ್ಲಿರಲಿ ಅದು ರಾಗಕ್ಕೆ ನಿಲುಕದ ಭಾವವಾಗಿ.

ಕನಸಿನಂತೆ ಕಳೆದು ಹೋದ ಆ ಮುಸ್ಸಂಜೆಯ ಛಾಯೆ

ಮರುಭೂಮಿಯಲ್ಲಿ ಚಿಗುರಿದ ಜೀವಸೆಲೆ

ಇನ್ನೆಲ್ಲಿ ಅಲೆಮಾರಿ ಬದುಕು ಸಾಕು ಬಿಡು ಹುಡುಕಾಟ

ಅತ್ತಿತ್ತ ಪರದಾಡದಿರು ನೀನಿರುವಲ್ಲೇ ಸುಮುಧುರ ಗಾನ.

ನೀರಲ್ಲಿ ಮೀನಿನ ಹೆಜ್ಜೆ ಕಂಡವರುಂಟೇ

ಕಾಡು ವನದಲ್ಲಿ ಜೋಗಿಯ ಜಾಡು ಹಿಡಿದವರುಂಟೇ

ನಿನ್ನೆಯ ಹಾಡುಗಳು ಕನ್ನಡಿಯೊಳಗಿನ ಗಂಟು

ಅಳಿಸಿ ಹೋದ ಪದಗಳು… ಹಾಳು  ಮರೆವು.

# ಅಧಿಪತ್ಯ

ಒಂದು ಬೊಗಸೆ ನೀರಲ್ಲಿ ಮುಳುಗುವಷ್ಟು ಪ್ರಪಂಚ

ಅದರ ಚಕ್ರವರ್ತಿಯಾಗುವ ಕನವರಿಕೆಯೇಕೆ ನಿನಗೆ?

ನಿನ್ನ ಹೆಸರಿಗೆ ಬೆಲೆ ಬಂದ ಕಾಲವಿದು, ನಿಜ 

ಆದರೇನು,ತಿರುಕನ ಕನಸಿನ ಹಾಗೆ ಕಂಡಷ್ಟೇ ಭಾಗ್ಯ.

ರಾತ್ರಿಯಿಡೀ ಬೆರಳುಗಳ ಹುಚ್ಚು ನರ್ತನ 

ಉಗುರಿನಲ್ಲಿ ಎದುರಾಳಿಯ ರಕ್ತದ ಸುಳಿವಿಲ್ಲದೆಯೇ

ಮುಗಿದು ಹೋದವೆಷ್ಟೋ ಕಥೆಗಳು.

ಗೋಡೆಯ ಮೇಲೆ ಭೀತಿಯ ನೆರಳು

ಅಲ್ಲಿ ಹಸಿದ ತೋಳಗಳಿಗೆ ಕದವೊಂದು ತೆರೆದ ಶಬ್ದ

ಮತ್ತೆ ಎಲ್ಲ ನಿಶಬ್ದ .

ಕಳೆದುಕೊಳ್ಳಲು ನಿನ್ನಲ್ಲೇನೂ ಉಳಿದಿಲ್ಲ

ಈ ಕೋಣೆ … ಈ ಮನೆ … ಎಲ್ಲ ನಿನ್ನ ಅಸ್ತಿತ್ವದ ಪರಿಧಿಯಾಚೆ

ಆದರೆ ಹೆಬ್ಬಾಗಿಲಿಗೆ ದೃಷ್ಟಿ ನೆಟ್ಟ ಆ ಜೋಡಿ ದೀಪಗಳು ಹೊತ್ತಿ ಉರಿಯುತ್ತಿವೆ

ಸಹಸ್ರ ಪ್ರಶ್ನೆಗಳು … ಎದೆ ಬಿರಿಯುವಂಥ ಮೌನ …

ಅತ್ತ ನೋಡದೆ ನಡೆದುಬಿಡು ಮರಳಿ ಬಾರದ ಲೋಕಕ್ಕೆ .

ನೀನು ಅಲೆದಾಡುವ ಕಡುಗಪ್ಪು ಓಣಿಗಳು

ಹೊಗೆಯೇರಿದ ವಿಷ ಗಾಳಿಯಲ್ಲಿ ನಿನ್ನ ಮಾತಿನ ಹೊರತು ಸದ್ದಿಲ್ಲ . 

ಗ್ರಹಣ ಹಿಡಿದ ಚಂದ್ರನಂತೆ

ಕಂಚು ಪೀತಾಂಬರದಲ್ಲಿ ಸಿಲುಕಿದ ಒಂಟಿ ರೇಷ್ಮೆಯ ಎಳೆ

ಕುಟುಕು ಹೊಳಪು ಕೈ ಬಿಡುವ ಹೊತ್ತು.

ಹೇಗೆ ಅರ್ಥ ಮಾಡಿಸಲಿ

ನೀನು ಮನೆಯಂಗಳದಿ ಹೂತಿರುವ ಸವಿನೆನಪುಗಳಲ್ಲಿ ನನ್ನ ಪಾಲಿದೆ .

ಕುಡಿಯೊಡೆದ ಜೋಳದ ರಾಶಿಯ ಸುತ್ತ ಇನ್ನೂ ಸಂಕ್ರಾಂತಿಯ ನಗೆಬುಗ್ಗೆ

ಇತ್ತ ನಿನ್ನ ತುಟಿಗಳ ಮೇಲೆ ಮರುಭೂಮಿ.

ಇನ್ನೂ ಕಾಮನಬಿಲ್ಲಿನ ಬಣ್ಣವಾರಿಲ್ಲ

ನಿನ್ನ ಕೈಯಲ್ಲಾಗಲೇ ಲೇಖನಿ . ಮನದಲ್ಲಿ ಕರಾಳ ಕಥೆಯ ಹೊಂಚು.

ನಿನ್ನ ಹುಡುಗಾಟ … ಆಗೊಮ್ಮೆ ಈಗೊಮ್ಮೆ ತುಂಟ ನಗೆ

ಯಕ್ಷಿಣಿಯ ಕುತಂತ್ರ. ಅರೆಕ್ಷಣದ ಮರೆವು.

ಮತ್ತೆಲ್ಲ ಮೌನ.

ದೂರದ ಕಾಡಲ್ಲಿ ನರಿಯೊಂದಕ್ಕೆ ಒಮ್ಮೆಲೇ ಬೇಟೆಯ ಚಪಲ

ನಿನ್ನ ಹುಬ್ಬುಗಳ ಮೇಲಾಗಲೇ ರಕ್ಕಸ  ನೃತ್ಯ. 

ನಿನ್ನ ಒಂದು ನುಡಿಯಲ್ಲದೇನು ಮಾಯೆಯೋ ನಾ ಕಾಣೆ

ರಾತ್ರಿ ಹಗಲಾಗುವ ಮೊದಲೇ ನಂದಾದೀಪದಂತೆ ನಸುನಗುವ

ಊರೆಲ್ಲ ಕಾಳ್ಗಿಚ್ಚಿನ ಉರಿ ಉರಿ.

ನಿನ್ನ ಹಣೆಯ ಮೇಲೆ ಬೆವರು ಮಣಿಗಳ ಮಾಲೆ

ಇತ್ತ ಊರ ಕೆರೆಗಳೆಲ್ಲ ಕೆಂಪು ಕೆಂಪು.

ಎಲ್ಲಿಂದಲೋ ಬಂದೆ… ಎಲ್ಲಿಗೋ ಹೊರಟಿರುವೆ!

ನಿನ್ನ ಮನೆ ಯಾವುದೋ … ನಿನ್ನ ನಿಷ್ಠೆ ಎತ್ತಲೋ !

# ಪುನರ್ಜನ್ಮ

ಇನ್ನೂ ಹುಟ್ಟದ  ಕೂಸಿಗೆ ಕುಲಾವಿ 

ನನ್ನ ಹೃದಯದ ಕವನಕ್ಕೆ ಟಿಪ್ಪಣಿ.

ಒಮ್ಮೆ ನೀರೊಲೆಯ ಕುದಿನೀರ ಗುಳ್ಳೆ

ಇನ್ನೊಮ್ಮೆ ಚಿಗುರೆಲೆಯ ಮೇಲಿನ ಇಬ್ಬನಿ ಮಣಿ

ಸರ ಸರನೆ ಹರಿದು ಬಂದ ಮೊಂಡು ಮಗುವಿನ ಹಾಗೆ 

ಅತ್ತು ಕರೆದು ರಂಪ ಮಾಡಿ ಬಿಡಲೊಲ್ಲದು ಬೆರಳ ತುದಿ .

# ಚಾವಡಿ

ಕ್ಷಣಕ್ಕೊಂದು ಕತೆ, ದಿನಕ್ಕೊಂದು ಚಿತ್ತಾರ

ಕೆಂಪು ತೀಡಿದ ನೆಲದ ಮೇಲೆ ತಲೆಮಾರುಗಳ ಬಿಂಬ

ಉಜ್ಜಿದಷ್ಟೂ ಹೊಳಪೇರುವ ನೆನಪುಗಳು. 

ರಾಟೆ ಬಳಸಿ ನಿಂತ ಹಗ್ಗದಲ್ಲಿ

ಹೊಸೆದುಕೊಂಡ ಸಾವಿರ ಕನಸು.

ನನಸುಗಳು ತಿರುತಿರುಗಿ ವಲಸೆ ಬರುವ ಹಕ್ಕಿಗಳು

ಮಾವಿನ ಮರದ ಸುತ್ತ ತೀರದ ಚಿಲಿಪಿಲಿ

ತುಳಸಿಯ ಮೈತುಂಬ ಬಾಡದ ಚಿಗುರು.

ನಿಲುಕದ ನಕ್ಷತ್ರಗಳಿಗೆ ಅಲೆಮಾರಿ ಬದುಕು

ಎಲ್ಲೆಂದರೆ ಅಲ್ಲಿ ಗೂಡು ಕಟ್ಟುವವು  

ಮಾಡು ಹತ್ತಿ ಹರಡಿದ ತಿಂಗಳ ಬೆಳಕಿನಂತೆ 

ಹಜಾರದ ಮೇಲೆ ಅಪರೂಪದ ಮಿನುಗು

ಬಿರುಕುಬಿಟ್ಟ ಹೆಂಚೊಂದು ಕೊಟ್ಟ ಸಲಿಗೆಯಿರಬೇಕು.

ಬೆಂಕಿಯಾರದ ಒಲೆಯ ಬಿಸಿಯುಸಿರಿನಂತೆ

ಎಷ್ಟು ಮಳೆ ಕಂಡರೂ ಒಡಲಲ್ಲಿ ನಿಗಿ ನಿಗಿ ಕೆಂಡ

ಅದೆಂಥ ವ್ಯಾಜ್ಯ ಅರವತ್ತರ ಅರುಳು ಮರುಳಿಗೆ!

ಚಾವಡಿಯ ಗಲಿಬಿಲಿಗೂ ನಿನಗೂ ಇಂದು ನಿನ್ನೆಯ ನೆಂಟಸ್ಥನವಲ್ಲ

ಹೊಸದಾಗಿ ಸಾರಿಸಿದ ಅಂಗಳದ  ಅಂಚು ಮತ್ತೆ ತಲೆಕೆದರಿದೆ

ಮೊನ್ನೆ ತಿದ್ದಿದ ತಪ್ಪು ಇಂದು ಮರುಕಳಿಸಿದೆ.

ಸರಸು, ಕೇಳಿದೆಯಾ ನಿನ್ನ ಕೈಗಳಿಗೆ ನಿರಂತರ ತೇಪೆ ಹಚ್ಚುವ ಕೆಲಸ 

ಅಲ್ಲೆಲ್ಲೋ ಮಾಡು ಸೋರುವ ತಾಳಕ್ಕೆ ನಿನ್ನ ಹೆಜ್ಜೆಯ ಅನಿವಾರ್ಯ ನಾಟ್ಯ. 

# ಅಂಜುವೆಯೇಕೆ

ಅವು ನಿನ್ನವೇ ಅಲ್ಲವೇ-

ನಿನ್ನ ಮನಸ್ಸಿನ ಸಾವಿರ ಕ್ಲಿಷ್ಟ ಭಾವನೆಗಳು.

ಗಾಳಿ ಸೋಕಲಿ ಬಿಡು, ನೆನೆಯಲಿ ಬಿಡು ತುಂತುರು ಮಳೆಯಲಿ

ಬಿಸಿಲಿಗೆ ಆರಲಿ, ಮನದ ಜಗುಲಿಯ ಅಂಚಿಗೆ ಹರವು ಅವನ್ನು

ಅವಕ್ಕೆ ಹೆಸರಿಡುವ ಗೊಂದಲ ನಿನಗ್ಯಾಕೆ

ಎದೆಯ ತೊಟ್ಟಿಲಲ್ಲಿ ಕೆಲ ಕಾಲ ಚೆಲ್ಲಾಟವಾಡಿ

ಭ್ರಮೆ ಹಿಡಿಸಿ ತಲೆ ಕೆಡಿಸಿ

ಹೋಗುವಾಗ ಹೇಳಬೇಕೆನ್ನುವ ಕನಿಷ್ಟ ಶಿಷ್ಟಾಚಾರವೂ ಇಲ್ಲದ

ಅವಕ್ಕೆ, ನಿನ್ನ ಸ್ವಾಗತ ಗೀತೆಯ ಚರಣ ಬೇಕಿಲ್ಲ

ಕೆಂಪು ರತ್ನಗಂಬಳಿಯ ಹಾಸು ಬೇಕಿಲ್ಲ

ನಿನ್ನ ಇನಿದನಿಯ ಜೋಗುಳ ಬೇಕಿಲ್ಲ.

ನಿನ್ನ ಹುಚ್ಚು ಮನದ ನವಜಾತಗಳು

ಎಷ್ಟು ಬೆಳೆದವೋ, ಉಳಿದವೋ , ಅಳಿದವೋ

ಎಂದು ತಿರುಗಿ ತಿರುಗಿ ನೋಡಬೇಡ.

ಹೆಜ್ಜೆ ಗುರುತು ಬಿಡದ ನುರಿತ ಕಳ್ಳನಂತೆ

ಜಾರಿಕೊಂಡೆನೆಂಬ ಹುಂಬ ಹೆಮ್ಮೆ ಅವಕ್ಕೆ .

ನಿನ್ನ ಜಾಣ್ಮೆ ನಿನಗಿರಲಿ,

ಕ್ಷಣಕ್ಕೊಮ್ಮೆ ಬಣ್ಣ ಬದಲಿಸುವ ಊಸರವಳ್ಳಿ

ಎಂದು ಪಟ್ಟ ಕಟ್ಟಿ ಗಡೀಪಾರು ಮಾಡಿ

ಕೈ ತೊಳೆಯಲಿಲ್ಲವೇ ಅಂದು .

ಪರದೆ ಬಿದ್ದಮೇಲೂ ಬಣ್ಣ ಕಳಚಲೊಲ್ಲವು

ತಾಳ ತಪ್ಪಿ ಹೆಜ್ಜೆ ಸೋತರೂ ನಿಲ್ಲದ ನಾಟಕ.

# ಹೌದು ಮಾರಾಯ್ರೆ

ವಸಂತ ಬಂದ್ರೆ ಹೀಗೇ

ಊರು ಕೇರಿಯೆಲ್ಲ ಓಕುಳಿ ಆಡಿಧಾಂಗೆ ಬಣ್ಣ ಬಣ್ಣ.

ಬೆಳಗಾದ್ದೆ ತಡ ಮೈ ತುಂಬಾ ಚಿನ್ನ ಏರಿಸ್ಕೊಂಡು  

ಇವರೇನು ಕುಸುಮ ಬಾಲೆಯರೋ ಕಾಂಚನ ಕನ್ನೆಯರೋ

ಗಿಡ ವನಗಳ ತಲೆಯೇರಿ ಫಳ ಫಳ ಮೆರೆವುದೊಂದೇ ಧ್ಯಾನ.

ಮತ್ತೆ ಕೇಳ್ಬೇಕೆ ಭೃಂಗಗಳ ಝೇಂಕಾರ

ಅದು ಹ್ಯಾಂಗೋ ಒಂದನ್ನು ಒಲಿಸ್ಕೊಂಡು ಜೇನು ಹೀರಿ

ಇನ್ನೊಂದು ಪುಷ್ಪವರಸಿ ಹೊರಟಾಗ

ಕಂಡೂ ಕಾಣದಂತೆ ಜಾಣ ಕುರುಡು ಬೇರೆ.

ವಸಂತ ಬಂದ್ರೆ  ಹೀಗೇ

ಹಕ್ಕಿಗಳಲ್ಲಿ ಅದೇನು ಸುದ್ದಿಯ ಸಂತೆಯೋ ಏನೋ

ದಿನವಿಡೀ ಕಲರವ. ಮುಸ್ಸಂಜೆ , ಕಳ್ಳ ಬೆಕ್ಕಿನ ಹಾಂಗೆ 

ಬಂದು ಹೊಳೆ ಹೊಳೆವ ಮೂಗುತಿ ಇಷ್ಟಿಷ್ಟಾಗಿ 

ಮೆದ್ದು ಹೋದ್ರೂ  ಪರಿವೆಯಿಲ್ಲ. ಏನು ಹಾಳು ಹರಟೆಯೋ. 

ಅಂಬರ ಸುಂದರಿ ಪಾಪ ಭಣಗುಟ್ಟಿ ದಿಕ್ಕು ತೋಚಧಂಗೆ ಕುಳಿತರೆ

ತಪ್ಪೊಪ್ಪಿಕೊಂಡು ಸುಮ್ನೆ ಗೂಡು ಸೇರಿದವುಗಳ 

ಕಣ್ಣಂಚು ಹನಿ ಹನಿ.

ವಸಂತ ಬಂದ್ರೆ ಹೀಗೇ

ಇನ್ನೇನು ಆಯಿತು ಬಿಡಿ ಎಂದು ಎದ್ದು ಹೊರಟರೆ 

ಮತ್ತೆ ಕೈ ಬೀಸಿತು ಮೋಹದ ಜಾಲ.

ಚಂದ್ರಿಕೆ ರೇಷ್ಮೆ ಉಟ್ಟು ಅಡಿ ಮೇಲೆ ಅಡಿಯಿಟ್ಟು 

ಬರುವ ಹೊತ್ತಿಗೆ ಚುಕ್ಕಿಗಳಲ್ಲಿ ಒಂದಿಷ್ಟು ಗಲಿಬಿಲಿ. 

ಅಂಗಳಕೆ ಮಿರಿ ಮಿರಿ ಮಿನುಗುವ ರಂಗವಲ್ಲಿ ಹಾಸೋ ಹೊತ್ತಿಗೆ

ಸರಿಯಾಗಿ ಬೆಣ್ಣೆ ಕೊರಳ ಸುಂದರಿಯ ಮೆರವಣಿಗೆ ಹೊರಟಾಯಿತು.

ಅವಳು ಬಾನಿಗಿಳಿದರೆ ಕೇಳಬೇಕೇ

ನಮ್ಮ ಕೆಂಡಸಂಪಿಗೆ ಗುಲಾಬಿ ಕೆನ್ನೆಯ ಮಲ್ಲೆಯರ ಮೇಲೆ

ಕೊಡಪಾನವೆತ್ತಿ ಸುರಿದಂತೆ ಬೆಳದಿಂಗಳ ಮಳೆ

ಚೆಲುವೆಯರ ಮೊಗದ ತುಂಬಾ ಮಾಸದ ಹೂ ನಗೆ.

ಹೌದು ಮಾರಾಯ್ರೆ ವಸಂತ ಬಂದರೆ ಹೀಗೇ ನೋಡಿ

ತಪ್ಪಿಸಿಕೊಂಡವರುಂಟೇ ಈ ಪರಿಯ ಸೊಬಗ ಹೇಳಿ.

# ಮಾಡಬಾರದ ಆಕ್ಷೇಪ

ನೀ ಹೀಗೆ ಬಾನಲ್ಲಿ ಹಾರಾಡಬೇಡ ತಂಗಿ

ಕಿವಿಗೊಟ್ಟು ಕೇಳು ನನ್ನ ಮಾತು –

ಚೂಪು ಕೊಕ್ಕಿಲ್ಲ, ಹದ್ದೀನ ನೋಟವಿಲ್ಲ

ಮೊರದಂಥ ರೆಕ್ಕೆಯಿಲ್ಲ, ಅಂಥಾ ಗಿಡುಗನ ನೀ ನೋಡಿಲ್ಲ. 

ನೀ ಮೇಲಕ್ಕೆ ಕೈ ಚಾಚಿ ನಕ್ಷತ್ರ ಹೆಕ್ಕುತ್ತಿದ್ದರೆ ಹೇಗೆ ನೋಡೀಯ ತಂಗಿ 

ನಿನ್ನ ತಲೆ  ಮೇಲೆ  ಕರಿ ನೆರಳು. 

ನೀ ಹಾರು ಹಾರುತಿದ್ಧಾಂಗೆ

ಬಿಳಿ ಹಂಸಧಾಂಗೆ ಕಂಡದ್ದು ರಣಹದ್ದಾಗಿ ಎರಗಿ 

ನಾ ರೆಪ್ಪೆಯೊಳಗಿಟ್ಟು ಕಾದದ್ದೆಲ್ಲ ಕ್ಷಣದಲ್ಲಿ ಗಾಳಿ ಗೋಪುರ. 

ನೀ ಹೀಗೆ  ರಸ್ತೆಗಿಳಿಯಬೇಡ ತಂಗಿ

ಕಿವಿಗೊಟ್ಟು ಕೇಳು ನನ್ನ ಮಾತು –

ಕೋರೆ  ಹಲ್ಲಿಲ್ಲ ಅವಗೆ , ನಾಲಿಗೆ ಚಾಚಿಲ್ಲ ಹೊರಗೆ

ಕೆಂಡಧಾಂಗ ಉರಿಗಣ್ಣಿಲ್ಲ, ಕುತ್ತಿಗೆಯಲ್ಲಿ ರುಂಡಮಾಲೆಯಿಲ್ಲ

ಅಂಥಾ ರಾಕ್ಷಸ ಓಣಿ ತಿರುವಿನೊಳಗೆ. 

ನೀ ತಲೆ ಬಗ್ಗಿಸಿ ನಡೆದರೆ  ಹೇಗೆ  ಕಂಡೀಯ ತಂಗಿ

ಕಣ್ಣೆರಡು ಪೋಲಿ ಅಲೆಯುತ್ತವೆ ಮೈಯ್ಯ ತುಂಬ. 

ನೀ ನೋಡು ನೋಡುತ್ತಿದ್ದಹಾಂಗೆ

ಆಕಳ ಹಾಂಗೆ ಕಂಡಾಂವಾ ಹಸಿದ ಹುಲಿಯಾಗಿ 

ನೀ ಮುಚ್ಚಿಟ್ಟ ಬಚ್ಚಿಟ್ಟ ಮಾನವೆಲ್ಲ ತಿಂದು ತೇಗುವನು.

ನೀ ಜೀವ ಅಂಗೈಯ್ಯಲ್ಲಿ ಹಿಡಿದು ಬಾಗಿಲಲಿ ಕುಸಿದಾಗ

ನಾ ಹೇಗೆ ತೀರಿಸಲಿ ನಿನ್ನ ದುಃಖ ಹೇಳು.

ತಂಗೀ

ನೀ ಹೀಗೆ  ಮೊಗ್ಗಾಗಿ ಬಿರಿಯಬೇಡ  ನೋಡು

ನೀ ಹೀಗೆ  ಅರಳಿ ಕಂಪು  ಸೂಸಬೇಡ  ನೋಡು

ನೀ ಹೀಗೆ ಅಂಜಿಕೆ ಬಿಟ್ಟು ನಗಬೇಡ  ನೋಡು

ನೀ ಹೀಗೆ ಕೂರಬೇಡ ನೋಡು 

ನೀ ಹೀಗೆ ನಿಲ್ಲಬೇಡ ನೋಡು

ನೀ ಹೀಗೆ ಇರಬೇಡ ನೋಡು

ನೀ ಇರಬೇಡ ನೋಡು.